ಸಾಲಿಗ್ರಾಮ ಹಬ್ಬ 2021
ಈ ಬಾರಿ ಕೊವೀಡ್ ಮಾರ್ಗಸೂಚಿಯ ಅನುಸಾರ ಧಾರ್ಮಿಕ ಕಾರ್ಯಕ್ರಮಗಳನ್ನು ಮಾತ್ರ ನಡೆಸುವುದರ ಮೂಲಕ ಜನವರಿ 16ರಂದು ಬ್ರಹ್ಮರಥೋತ್ಸವದ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಜರುಗಿಸಲಾಯಿತು.
ರಥಾರಂಭ : ಜನವರಿ 10 ರಂದು ಪೂರ್ವಾಹ್ನ ಘಂಟೆ 10-00ಕ್ಕೆ ಕುಂಭಲಗ್ನದಲ್ಲಿ ಶ್ರೀಗುರುನರಸಿಂಹ ದೇವರಿಗೆ ಪೂಜೆ ಸಲ್ಲಿಸಿ ಬ್ರಹ್ಮರಥವನ್ನು ಪೂಜಿಸಿ ರಥಕೊಟ್ಟಿಗೆಯಿಂದ ಹೊರ ಸಾಗಿಸಿ ರಥಕಟ್ಟಲು ಪ್ರಾರಂಭಿಸಲಾಯಿತು.
ಮಹೂರ್ತಬಲಿ ಅಂಕುರಾರೋಪಣ : ಜನವರಿ 13ರ ಸಂಜೆ ಬ್ರಹ್ಮರಥೋತ್ಸವದ ಕಾರ್ಯಕ್ರಮಗಳು ನಿರ್ವಿಘ್ನವಾಗಿ ನಡೆಯಲೆಂದು ಶ್ರೀಗುರುನರಸಿಂಹ ದೇವರಲ್ಲಿ ಪ್ರಾರ್ಥನೆ, ಪುಣ್ಯಹವಾಚನ ಮಹೂರ್ತಬಲಿ ಅಂಕುರಾರೋಪಣ ಮಾಡಲಾಯಿತು. ಶೀಆಂಜನೇಯ, ಶ್ರೀ ಮಹಾಗಣಪತಿ ಮತ್ತು ಶ್ರೀದುಗರ್ಾಪರಮೇಶ್ವರಿ ಅಮ್ಮನವರಿಗೆ ರಂಗಪೂಜೆ ಮತ್ತು ಶ್ರೀಗುರುನರಸಿಂಹ ದೇವರಿಗೆ ಕಿರಿರಂಗಪೂಜೆ, ಸೇವೆಯನ್ನು ನೆರವೇರಿಸಲಾಯಿತು.
ಮಕರ ಸಂಕ್ರಮಣ, ಧ್ವಜಾರೋಹಣ : ಜನವರಿ 14ರ ಬೆಳಿಗ್ಗೆ ಗಣಹೋಮ, ನರಸಿಂಹಹೋಮ, ಕಲಶಾಬಿಷೇಕವನ್ನು ಮಾಡಿ ಮಧ್ಯಾಹ್ನ 12ಕ್ಕೆ ಮಹಾಪೂಜೆ ನಂತರ ಶ್ರೀ ಆಂಜನೇಯ ದೇವಸ್ಥಾನದವರೆಗೆ ರಜತ ರಥೋತ್ಸವವನ್ನು ನಡೆಸಲಾಯಿತು. ಸಂಜೆ ಮೆರವಣಿಗೆಯ ಮೂಲಕ ಕಾರ್ಕಡ ಗ್ರಾಮಕ್ಕೆ ಹೋಗಿ ಗ್ರಾಮದ 4ಹೋಳಿಯ ಗ್ರಾಮಸ್ಥರು ಅಣಿಮಾಡಿ ಇಟ್ಟಿರುವ ಧ್ವಜಮರವನ್ನು (ಅಡಕೆ ಮರ) ಪೂಜಿಸಲಾಯಿತು ನಂತರ ಕಾರ್ಕಡ ಗ್ರಾಮಸ್ಥರು ಮೆರವಣಿಗೆಯ ಮೂಲಕ ಧ್ವಜಮರವನ್ನು ಶ್ರೀದೇವಳಕ್ಕೆ ತಂದು ಚಿತ್ರಪಾಡಿ ಗ್ರಾಮದಿಂದ ತಂದಿರುವ ಬಾಳೆಗಿಡದೊಂದಿಗೆ ಅಲಂಕರಿಸಿ ಧ್ವಜಸ್ಥಂಭಕ್ಕೆ ಏರಿಸಲಾಯಿತು ತಂತ್ರಿಗಳಾದ ವೇ.ಮೂ. ಕೃಷ್ಣ ಸೋಮಯಾಜಿಯವರು ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಿ, ಧ್ವಜಮರಕ್ಕೆ ಕಲಶಾಭಿಷೇಕ ಮಹಾಮಂಗಲಾರತಿ ಮಾಡಿ ಧ್ವಜವನ್ನು (ಗರುಡಪಠ) ಏರಿಸಿದರು. ನಂತರ ಉತ್ಸವಬಲಿ, ಕಿರಿರಂಗಪೂಜೆ ಉತ್ಸವವನ್ನು ಮಾಡಲಾಯಿತು.
ಚತುರ್ವೇದ ಪಾರಾಯಣ ಸುತ್ತುಸೇವೆ, ಕಟ್ಟೆಪೂಜೆ : ಜನವರಿ 15ರ ಬೆಳಿಗ್ಗೆ ಅಧಿವಾಸ ಹೋಮ ಪ್ರಾರಂಭ, ಚತುರ್ವೇದ ಪಾರಾಯಣ ಸಂಜೆ ಉತ್ಸವಬಲಿ, ಸಪ್ತ ಸುತ್ತು ಸೇವೆ ಕುಣಿತವು ನಡೆಯಿತು. ಈ ಬಾರಿಯ ಜಾತ್ರೆಯ ವಿಶೇಷ ಕಳೆಯಾಗಿ ದೇವರು ಹೊತ್ತಿರುವ ಶ್ರೀ ಪಳ್ಳಿ ಪುಟ್ಟಣ್ಣನವರ ಕುಣಿತ ಸೇವೆಯ ಪರಿ ನೋಡಿದ ಭಕ್ತಾದಿಗಳು ಭಕ್ತಿಭಾವಕ್ಕೆ ಪರವಶವಾದರು. ಸುತ್ತು ಸೇವೆಯ ನಂತರ ಅಲಂಕೃತ ಪಲ್ಲಕಿಯಲ್ಲಿ ಪುರಮೆರವಣಿಗೆ ಶ್ರೀದೇವಳದ ನವಗ್ರವ ವನದಲ್ಲಿರುವ ಶ್ರೀಗುರುನರಸಿಂಹ ದೇವರ ಮೂಲಸ್ಥಾನವಾಗಿರುವ ಅಶ್ವಥ್ಥ ಮರದ ಕಟ್ಟೆ, ಕೆರೆಕಟ್ಟೆ ಶ್ರೀ ರಾಘವೇಂದ್ರ ಐತಾಳರ ಮನೆ, ಶ್ರೀಗೋಪಾಲಕೃಷ್ಣ ದೇವಸ್ಥಾನದ ಕಟ್ಟೆ, ರಥಬೀದಿಯಲ್ಲಿರುವ ಬಡಾಬದಿಯ ಅಶ್ವತ್ಥಮರ ಕಟ್ಟೆ, ಪೇಟೆ ಕಟ್ಟೆ, ಶ್ರೀಆಂಜನೇಯ ದೇವಸ್ಥಾನದ ಕಟ್ಟೆ ಮತ್ತು ತೆಂಕು ಬದಿಯ ಅಶ್ವತ್ಥ ಮರದ (ನಾಯರ್ ಕಟ್ಟೆ) ಕಟ್ಟೆಗಳಲ್ಲಿ ಶ್ರೀದೇವರ ಕಟ್ಟೆ ಪೂಜೆಯನ್ನು ನೆರವೇರಿಸಲಾಯಿತು. ಶ್ರೀದೇವಳಕ್ಕೆ ಮರಳಿದ ಶ್ರೀದೇವರಿಗೆ ನಿತ್ಯಪೂಜೆ, ನಿತ್ಯಬಲಿ, ಹಿರೇರಂಗಪೂಜೆಯನ್ನು ಮಾಡಲಾಯಿತು, ನಂತರ ಉತ್ಸವಬಲಿ, ಪುಷ್ಫರಥೋತ್ಸವ, ಓಲಗಮಂಟಪ ಸೇವೆ, ಮಂಗಳಾರತಿಯನ್ನು ಮಾಡಿ ಇಂದಿನ ಹಬ್ಬದ ಕಾರ್ಯಕ್ರಮವನ್ನು ಪೂರ್ಣಗೊಳಿಸಲಾಯಿತು.
ಬ್ರಹ್ಮರಥೋತ್ಸವ : ಜನವರಿ 16ರ ಬೆಳಿಗ್ಗೆ ಸವಾರಿ, ಕಲಶಾಭಿಷೇಕ, ರಥಶುದ್ಧಿ, ನವಗ್ರಹ ಹೋಮ. ನಿತ್ಯಪೂಜೆ ನಿತ್ಯ ಬಲಿ, ಮಹಾಪೂಜೆ ಉತ್ಸವಬಲಿ, ಸುತ್ತುಸೇವೆಯ ನಂತರ ಬ್ರಹ್ಮರಥವನ್ನು ಏರಿದ ಶ್ರೀಗುರುನರಸಿಂಹ ದೇವರನ್ನು ಪೂಜಿಸಿ ಭಕ್ತರ ಸಹಕಾರದಿಂದ ಬ್ರಹ್ಮರಥವನ್ನು ಎಳೆಯುದರ ಮೂಲಕ ರಥಾರೋಹಣವು ಸಂಪನ್ನಗೊಂಡಿತು. ರಥವನ್ನು ಏರಿ ನಿಂತಿರುವ ಶ್ರೀದೇವರಿಗೆ ಹಣ್ಣುಕಾಯಿ ಸೇವೆಯನ್ನು ಭಕ್ತಾದಿಗಳ ಸಲ್ಲಿಸಿದರು ನಂತರ ಬಂದಿರುವ ಭಕ್ತಾದಿಗಳಿಗೆ ಅನ್ನಸಂತರ್ಪಣೆಯನ್ನು ಮಾಡಲಾಯಿತು. ಸಂಜೆ 6ಕ್ಕೆ ಬ್ರಹ್ಮರಥವನ್ನು ಏರಿ ಶ್ರೀಗುರುನರಸಿಂಹ ದೇವರನ್ನು ಪೂಜಿಸಿ ಶ್ರೀಆಂಜನೇಯ ದೇವಳದವರೆಗೆ ಬ್ರಹ್ಮರಥವನ್ನು ಎಳೆದು ಶ್ರೀಆಂಜನೇಯ ದೇವರಿಗೆ ಪೂಜೆ ಸಲ್ಲಿಸಿ ಮರಳಿ ರಥಾವರೋಹಣವನ್ನು ಮಾಡಲಾಯಿತು ನಂತರ ಪಲ್ಲಕಿ ಮೇಲೆ ಶ್ರೀದೇವಳಕ್ಕೆ ಆಗಮಿಸಿದ ದೇವರಿಗೆ ಮಹಾಮಂಗಳಾರತಿ, ಅಷ್ಟಾವಧಾನ ಸೇವೆ, ವಿಶೇಷ ಸೇವೆಯಾಗಿ ಕುಮಾರಿ ಅಮೃತಾ ಉಪಾಧ್ಯಾಯರಿಂದ ನೃತ್ಯ ಸೇವೆ, ಪಾರಂಪಳ್ಳಿ ದಿ ವೀಣೆ ರಾಮಚಂದ್ರ ಐತಾಳರ ಶಿಷ್ಯರಿಂದ ಶ್ರೀಮತಿ ಸುಮಂಗಲಿಯವರ ನೇತೃತ್ವದಲ್ಲಿ ವೀಣಾವಾದನ, ಮತ್ತು ಸಂಗೀತ ಸೇವೆಯನ್ನು ಮಾಡಲಾಯಿತು. ಶ್ರೀದೇವಳದ ಒಳಪ್ರವೇಶಿಸಿದ ದೇವರಿಗೆ ಮಹಾಮಂಗಳಾರತಿ ಮಾಡಲಾಯಿತು ಭೂತಬಲಿ ಪೂರೈಸಿ ಶ್ರೀ ಲಕ್ಷ್ಮೀದೇವಿಯೊಂದಿಗೆ ಶ್ರೀಗುರುನರಸಿಂಹ ದೇವರನ್ನು ಪೂಜಿಸಿ ಶಾಸ್ತ್ರೋಕ್ತವಾಗಿ ಶಯನೋತ್ಸವ ಸೇವೆಯನ್ನು ಮಾಡಿ ಜಾತ್ರೆಯ ದಿನದ ಕಾರ್ಯಕ್ರಮಗಳನ್ನು ಪೂರ್ಣಗೊಳಿಸಲಾಯಿತು.
ಪ್ರಭೋದೋತ್ಸವ, ಓಕುಳಿ ಸೇವೆ, ಅವಭೃತ ಸ್ನಾನ : ಜನವರಿ 17ರ ಬೆಳಿಗ್ಗೆ 7-30ಕ್ಕೆ ಪ್ರಭೋದೋತ್ಸವ, ಶಾಸ್ತ್ರೋಕ್ತವಾಗಿ ಸುಪ್ರಭಾತ ಸೇವೆ, ಅಷ್ಟಾವಧಾನ ಸೇವೆಯನ್ನು ಮಾಡಿ ಶ್ರೀದೇವರಿಗೆ ಮಹಾಪಂಚಾಮೃತಾಭಿಷೇಕ, ಮಹಾಪೂಜೆ, ಓಲಗ ಮಂಟಪ ಸೇವೆಯನ್ನು ಮಾಡಿ ಬಂದಿರುವ ಭಕ್ತಾದಿಗಳಿಗೆ ಪ್ರಸಾದವನ್ನು ಹಂಚಲಾಯಿತು.
ಸಂಜೆ 5-30ರಿಂದ ನಿತ್ಯಪೂಜೆ, ಉತ್ಸವಬಲಿ, ಓಕುಳಿಸೇವೆ, ಓಲಗಮಂಟಪ ಸೇವೆ ನಂತರ ರಜತ ರಥೋತ್ಸದಲ್ಲಿ ಕೋಟ ಶ್ರೀ ಹಂದೆ ಮಹಾವಿಷ್ಣು, ಮಹಾಗಣಪತಿ ದೇವಸ್ಥಾನಕ್ಕೆ ಪಯಣಿಸಿ ಅಲ್ಲಿನ ಪುಷ್ಕರಣಿೆಯಲ್ಲಿ ಅವಭೃತ ಸ್ನಾನವನ್ನು ಶ್ರೀದೇವರಿಗೆ ಮಾಡಲಾಯಿತು. ನಂತರ ಶ್ರೀ ಮಹಾಗಣಪತಿ ಮತ್ತು ಮಹಾವಿಷ್ಣು ದೇವರಿಗೆ ಮಹಾಮಂಗಳಾರತಿ ಶ್ರೀಗುರುನರಸಿಂಹ ದೇವರಿಗೆ ಮಂಗಳಾರತಿ, ಅಷ್ಟಾವಧಾನ ಸೇವೆಯನ್ನು ಮಡಲಾಯಿತು, ಪಾನಕ ಪನೀವಾರ ಪ್ರಸಾದವನ್ನು ಸ್ವೀಕರಿಸಿ ಪುರಮೆರವಣಿಗೆಯಲ್ಲಿ ಹಂದಟ್ಟು ಗೋವಿಂದ ಉರಾಳ ಕಟ್ಟೆ, ಚಿತ್ರಪಾಡಿ ಶ್ರೀಗಣೇಶ ಕೃಪಾ ದೇವಸ್ಥಾನ ಕಟ್ಟೆ, ಚಿತ್ರಪಾಡಿ ಶ್ರೀ ಎಳೆಮಠ ಈಶ್ವರ ದೇವಸ್ಥಾನ ಕಟ್ಟೆ, ಶ್ರೀ ಆಂಜನೇಯ ದೇವಸ್ಥಾನ ಮತ್ತು ಸಾಲಿಗ್ರಾಮ ಬಸ್ ಸ್ಟ್ಯಾಂಡ್ನ ರಿಕ್ಷಾ ಸ್ಟ್ಯಾಂಡ್ ಕಟ್ಟೆಗಳಲ್ಲಿ ಕಟ್ಟೆಪೂಜೆಗಳನ್ನು ನೇರವೇರಿಸಲಾಯಿತು.
ಶ್ರೀದೇವಳಕ್ಕೆ ಹಿಂದುರುಗಿದ ಶ್ರೀದೇವರನ್ನು ಓಲಗ ಮಂಟಪದಲ್ಲಿ ಕುಳ್ಳಿರಿಸಿ ಅಧಿವಾಸದ ಹೋಮದ ಪೂಣರ್ಾಹುತಿಯನ್ನು ಮಾಡಲಾಯಿತು. ಶ್ರೀದೇವರು ಪಲ್ಲಕ್ಕಿ ಉತ್ಸವದ ಮೇಲೆ ಹೊರಟು ಧ್ವಜಸ್ಥಂಭದ ಎದುರು ನಿಂತು ಧ್ವಜಾವರೋಹಣವನ್ನು ಮಾಡಲಾಯಿತು. ಶ್ರೀದೇವಳದ ಒಳಗೆ ಪ್ರವೇಶಿಸಿದ ಶ್ರೀದೇವರಿಗೆ ಮಹಾಮಂಗಳಾರತಿಯನ್ನು ನೆರವೇರಿಸಲಾಯಿತು. ನಂತರ ಮಂತ್ರಾಕ್ಷತೆ ಮತ್ತು ವಸಂತಾರಾಧನೆಯನ್ನು ಮಾಡುವುದರೊಂದಿಗೆ ಸಾಲಿಗ್ರಾಮ ಹಬ್ಬದ ಕಾರ್ಯಕ್ರಮವು ಅಂದಿಗೆ ಕೊನೆಗೊಂಡಿತು.
ಸಂಪ್ರೋಕ್ಷಣೆ, ಗಣಹೋಮ : ಜನವರಿ 18ರ ಬೆಳಿಗ್ಗೆ ನವಕಪ್ರಧಾನ ಕಲಶಾಭಿಷೇಕ, ಸಂಪ್ರೋಕ್ಷಣೆ, ಗಣಹೋಮ ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ ಈ ಬಾರಿಯ ಸಾಲಿಗ್ರಾಮ ಹಬ್ಬವು ಪರಿಪೂರ್ಣಗೊಂಡಿತು.