ಸಾಲಿಗ್ರಾಮದಲ್ಲಿ ಶ್ರಾವಣ ಶನಿವಾರ ಸಂಭ್ರಮ
ಶ್ರಾವಣಮಾಸದ ಶನಿವಾರಗಳಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಶ್ರೀ ಗುರುನರಸಿಂಹ ಮತ್ತು ಶ್ರೀಆಂಜನೇಯ ದೇವಳಕ್ಕೆ ಆಗಮಿಸಿ ಪೂಜೆ ಸಲ್ಲಿಸುತ್ತಾರೆ. ಪ್ರತಿ ವರ್ಷವು ತಪ್ಪದೇ ಶ್ರಾವಣ ಶನಿವಾರದ ವೃತವನ್ನ ಆಚರಿಸುವುದು ಮತ್ತು ಹರಕೆ ಸಲ್ಲಿಸುವ ಒಂದು ಪವಿತ್ರ ದಿನವಾಗಿದ್ದು ಊರ ಮತ್ತು ಪರವೂರಿನ ಎಲ್ಲಾ ಕಡೆಯಿಂದಲೂ ಭಕ್ತಾದಿಗಳು ಆಗಮಿಸುತ್ತಾರೆ ಬೆಳಗ್ಗೆ 5-00 ರಿಂದ ರಾತ್ರಿ 9-00ರ ತನಕ ಭೆಟಿ ನೀಡುವ ಭಕ್ತಾದಿಗಳು ಸರದಿ ಸಾಲಿನಲ್ಲಿ ತಾಳ್ಮೆಯಿಂದ ನಿಂತು ಶ್ರೀಗುರುನರಸಿಂಹ, ಶ್ರೀಆಂಜನೇಯ ಮತ್ತು ಪರಿವಾರ ದೇವರುಗಳಿಗೆ ಸೇವೆ ಸಲ್ಲಿಸುತ್ತಾರೆ ಪ್ರತಿ ವರ್ಷವೂ ಭಕ್ತಾದಿಗಳ ಸಂಖ್ಯೆ ಏರುತ್ತಿದ್ದು ಮಧ್ಯಾಹ್ಮ ಭೋಜನ ಪ್ರಸಾದ ಸೇವಿಸುವುದು ಕೂಡ ಹರಕೆಯ ಒಂದು ಭಾಗವಾಗಿದೆ. ಈ ವರ್ಷ ಅಗಸ್ಟ್ 03,10,17 ಮತ್ತು 24 ಈ ನಾಲ್ಕು ಶನಿವಾರಗಳು ಶ್ರಾವಣವಾಗಿ ಆಚರಿಸಲಾಗಿದೆ. ಈ ಎಲ್ಲಾ ದಿನಗಳಲ್ಲಿ ಭಕ್ತಾದಿಗಳು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದು, ಒಟ್ಟು 24ಸಾವಿರ ಭಕ್ತಾದಿಗಳು ಭೋಜನ ಪ್ರಸಾದವನ್ನು ಸ್ವೀಕರಿಸುತ್ತಾರೆ. ಎಲ್ಲಾ ಶನಿವಾರಗಳಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮವನ್ನು ಶ್ರೀದೇವಳದ ವತಿಯಿಂದ ಏರ್ಪಡಿಸಲಾಗಿದೆ.
ಸಿಂಹ ಸಂಕ್ರಾಂತಿ, ಸ್ವರ್ಣ ಕವಚ ಸಮರ್ಪಣೆ
ದಿನಾಂಕ 17-08-2019 ರ 3ನೇ ಶ್ರಾವಣ ಶನಿವಾರ ಸಿಂಹಸಂಕ್ರಮಣವನ್ನು ಆಚರಿಸಲಾಯಿತು. ಇಂದು ಭಕ್ತಾದಿಗಳ ಸಹಕಾರದಿಂದ ರಚಿತವಾದ ಸುಮಾರು 15ಲಕ್ಷದ ಮೌಲ್ಯದ ಶ್ರೀದೇವರ ಉತ್ಸವಮೂರ್ತಿಗೆ ಚಿನ್ನದ ಕವಚ, ಚಿನ್ನದ ಅಟ್ಟೆಕುಪ್ಪಸ, ಚಿನ್ನದ ತಂತ್ರಬಟ್ಟಲು, ಶ್ರೀಆಂಜನೇಯ ದೇವರಿಗೆ ಚಿನ್ನದ ಮುಖವಾಡ ಸಮರ್ಪಿಸಲಾಯಿತು. ಶ್ರೀದೇವರಿಗೆ ಪಂಚವಿಂಶತಿಕಲಶಾಭಿಶೇಕ, ಗಣಹೋಮ, ನಂತರ ಉತ್ಸವಬಲಿಯನ್ನು ಮಾಡಲಾಯಿತು.
ಶ್ರೀಕೃಷ್ಣ ಜನ್ಮಾಷ್ಠಮಿ
ದಿನಾಂಕ 23-08-2019ರ ಶುಕ್ರವಾರ ರಾತ್ರಿ 8-00 ರಿಂದ ಶ್ರೀಗುರುನರಸಿಂಹ ದೇವರಿಗೆ, ವಿಶೇಷ ಪೂಜೆ ಪಂಚಭಕ್ಷಪರಮಾನ್ನ ನೈವೇಧ್ಯ, ತೀರ್ಥಮಂಟಪದಲ್ಲಿ ಶ್ರೀಬಾಲಗೋಪಾಲಕೃಷ್ಣನಿಗೆ ಮಹಾಪಂಚಾಮೃತಾಭಿಷೇಕ, ಪಂಚಭಕ್ಷಪರಮಾನ್ನ ಮಹಮಂಗಳಾರತಿಯನ್ನು ಮಾಡಲಾಯಿತು (ಈ ಬಾಲಗೋಪಾಲಕೃಷ್ಣನಿಗೆ ಕೃಷ್ಣಜನ್ಮಾಷ್ಠಮಿ ದಿನದಂದು ಮಾತ್ರ ಪೂಜೆ ಮಾಡುವುದು ಒಂದು ವೈಶಿಷ್ಠವಾಗಿದೆ) ನಂತರ ಶ್ರೀಗುರುನರಸಿಂಹ ದೇವರಿಗೆ ಮಹಾಮಂಗಳಾರತಿಯನ್ನು ಮಾಡಲಾಯಿತು.
ವಿಟ್ಲಪಿಂಡಿ ಉತ್ಸವ ಮೆರವಣಿಗೆ
ಈ ಒಂದು ದಿನ ಮಾತ್ರ ಶ್ರೀದೇವರ ಉತ್ಸವವು ಶ್ರೀದೇವಳದಿಂದ ಹೊರಗೆ ಬರುವುದಲ್ಲದೆ ದಕ್ಷಿಣಾಭಿಮುಖವಾಗಿ ಸಾಗುವುದು ಒಂದು ವಿಶಿಷ್ಠ ಸಂಪ್ರದಾಯವಾಗಿದೆ. ಅದರಂತೆ ದಿನಾಂಕ 24-08-2019ರ ಶನಿವಾರ ಅಪರಾಹ್ನ 4-00ಕ್ಕೆ ಶ್ರೀಗುರುನರಸಿಂಹ ದೇವರಿಗೆ ಮಹಾಪೂಜೆ ಸಲ್ಲಿಸಿ ಶ್ರೀದೇವರ ಉತ್ಸವವು ಪಲ್ಲಕ್ಕಿಯ ಮೇಲೆ ಮಂಗಳವಾದ್ಯ, ವೇದಘೋಷ, ಭಜನೆ ಮತ್ತು ಬಿರುದಾವಳಿಗಳೊಡನೆ ಪುರಮೆರವಣಿಗೆಯಲ್ಲಿ ಮೊಸರು ಕುಡಿಕೆಗಳನ್ನು ಒಡೆಯುತ್ತಾ ಸಾಗಿ (ಎನ್.ಎಚ್.66. ಉಡುಪಿ ಮಾರ್ಗವಾಗಿ ಅಂದಾಜು 1.5ಕೀ.ಮಿ) ಎಡಬೆಟ್ಟು ಶ್ರೀಗೋಪಾಲಕೃಷ್ಣ ದೇವಸ್ಥಾನಕ್ಕೆ ತಲುಪಲಾಯಿತು. ಅಲ್ಲಿಯ ಗ್ರಾಮಸ್ಥರು ಶ್ರೀದೇವರಿಗೆ ವಿಶೇಷ ಪೂಜೆ, ಮಹಾಮಂಗಳಾರತಿ, ಅಷ್ಟಾವಧಾನ ಸೇವೆಯನ್ನು ಮಾಡುವುದರ ಜೊತೆಗೆ ಶ್ರೀಗೋಪಾಲಕೃಷ್ಣ ದೇವರಿಗೆ ವಿಶೇಷಪೂಜೆ ಮಹಾಮಂಗಳಾರತಿಯನ್ನು ಮಾಡಲಾಯಿತು. ಪಾನಕ ಪನೀವಾರವನ್ನು ಸ್ವೀಕರಿಸಿ ಪುನಃ ಮೆರವಣಿಗೆಯಲ್ಲಿ ದಾರಿಯ ನಡುವೆ ಭಕ್ತಾದಿಗಳಿಂದ ಮಂಗಳಾರತಿ ಸೇವೆಯನ್ನು ಸ್ವೀಕರಿಸುತ್ತಾ, ಮೊಸರು ಕುಡಿಕೆಯನ್ನು ಒಡೆಯುತ್ತಾ ಶ್ರೀಆಂಜನೇಯ ದೇವಳಕ್ಕೆ ಬರಲಾಯಿತು. ಅಲ್ಲಿ ಶ್ರೀಆಂಜನೇಯ ದೇವರಿಗೆ ವಿಶೇಷ ಪೂಜೆ ಮತ್ತು ಶ್ರೀದೇವರಿಗೆ ಮಹಾಮಂಗಳಾರತಿ ಅಷ್ಟಾವಧಾನ ಸೇವೆಯನ್ನು ಸಲ್ಲಿಸಿ, ಪನೀವಾರ ಪ್ರಸಾದವನ್ನು ಸ್ವೀಕರಿಸಿ ಮೆರವಣಿಗೆಯನ್ನು ಮೊಸರು ಕುಡಿಕೆಯನ್ನು ಒಡೆಯುತ್ತಾ, ಶ್ರೀದೇವಳಕ್ಕೆ ಹಿಂತುರುಗಿಸಲಾಯಿತು. ನಂತರ ಸೋಣೆ ಆರತಿ, ಮಹಾಮಂಗಳಾರತಿಯನ್ನು ಮಾಡಿ ವಿಟ್ಲಪಿಂಡಿ ಉತ್ಸವವನ್ನು ಸಂಪನ್ನಗೊಳಿಸಲಾಯಿತು.
ಶ್ರೀದೇವಳದ ತಂತ್ರಿಗಳಾದ ವೇ.ಮೂ. ಕೃಷ್ಣ ಸೋಮಯಾಜಿಯ ಪ್ರಧಾನತ್ವದಲ್ಲಿ ಅರ್ಚಕರಾದ ವೇ.ಮೂ.ಜನಾರ್ದನ ಅಡಿಗರು, ಅರ್ಚಕ ಸಹಾಯಕರು, ಉಪಾಧಿವಂತರು, ವೇದ ವಿದ್ಯಾರ್ಥಿಗಳು ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಕೆ.ಅನಂತಪದ್ಮನಾಭ ಐತಾಳರು, ಕಾರ್ಯದರ್ಶಿ ಶ್ರೀ ಜಿ. ಮಂಜುನಾಥ ಮಯ್ಯ, ಕೋಶಾಧಿಕಾರಿ ಶ್ರೀ ಪ್ರಸನ್ನ ತುಂಗ, ಧರ್ಮದರ್ಶಿ ವೇ.ಮೂ. ಚಂದ್ರಶೇಖರ ಉಪಾಧ್ಯ , ಕೂಟಮಹಾಜಗತ್ತು ಕೇಂದ್ರ ಮತ್ತು ಸಾಲಿಗ್ರಾಮ ಅಂಗಸಂಸ್ಥೆಯ ಪದಾಧಿಕಾರಿಗಳು ಮತ್ತು ಸದಸ್ಯರು, ಗ್ರಾಮಮೋಕ್ತೇಸರರು, ಕೂ.ಮ.ಜ ಮಹೀಳಾ ವೇದಿಕೆ, ಯುವ ವೇದಿಕೆ ವಿಪ್ರ ಮಹಿಳಾ ಬಳಗ ಗಣ್ಯವ್ಯಕ್ತಿಗಳು ಮತ್ತು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀದೇವರ ಮೆರವಣಿಗೆಯನ್ನು ಚಂದಗಾಣಿಸಿ ಶ್ರೀದೇವರ ಕೃಪೆಗೆ ಪಾತ್ರರಾದರು.